ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
“ಅಭಿಮಾನಂ ದಂತ ಭಗ್ನಂ “

ಲೇಖಕರು :
ರಾಜ್ ಕುಮಾರ್
ಗುರುವಾರ, ಆಗಸ್ಟ್ 22 , 2013

“ಕಲಾವಿದ” ಎಂದರೆ ಕಲೆಯನ್ನು ತನ್ನೊಳಗೆ ಆವಾಹಿಸುವವನು ಎಂದು ಕರೆಸಲ್ಪಡುತ್ತಾನೆ. ಪ್ರಕೃತಿ ಸಹಜವಲ್ಲದ, ಇತರರಿಗಿಲ್ಲದ ಗುಣಗಳನ್ನು ವಿಶಿಷ್ಟ ರೂಪದಲ್ಲಿ ತನ್ನಲ್ಲಿ ಹೊಂದಿಕೊಂಡು ಇರುವ ಗುಣಗಳು ಕಲೆ ಎನಿಸಲ್ಪಡುತ್ತದೆ. ತನ್ನಲ್ಲಿರುವ ಗುಣ ಯಾವುದೇ ಆದರೂ ಕಲೆ ಎನಿಸಿಕೊಳ್ಳಬೇಕಿದ್ದರೆ ಅದರ ವೈಶಿಷ್ಟ್ಯತೆಯನ್ನು ಅನುಭವಿಸುವರಿರಬೇಕು. ಇಲ್ಲಿ ಕಲಾವಿದ ಮತ್ತು ಪ್ರೇಕ್ಷಕ ಒಂದು ತಕ್ಕಡಿಯ ತಟ್ಟೆಗಳಿದ್ದಂತೆ. ಇವುಗಳು ಸಮಾನ ಮಟ್ಟದಲ್ಲಿದ್ದರೆ ಅದು ಸಂತುಲನೆಯನ್ನು ಕಾಯ್ದುಕೊಳ್ಳುತ್ತದೆ. ಆದರೆ ಇದರಲ್ಲಿ ಒಂದು ಪರಿಮಿತಿಯನ್ನು ದಾಟಿದಾಗ ಅಸಹಜವಾಗಿ ಸಂತುಲನೆಯನ್ನು ಕಳೆದುಕೊಂಡು ಕಲೆ ಎಂಬುದು ಯಾವುದರಿಂದ ಗುರುತಿಸಲ್ಪಡಬೇಕೋ ಅಲ್ಲಿ ಅದು ಅದಾಗಿರುವುದೇ ಇಲ್ಲ.

ಕಲಾವಿದ ಮತ್ತು ಕಲಾಭಿಮಾನಿ ಕಲೆಯ ಬಗ್ಗೆ ಒಂದೇ ಬಗೆಯ ತಾದಾತ್ಮ್ಯವನ್ನು ಹೊಂದಿದ್ದರೆ ಕಲೆ ವೇದಿಕೆಯ ಮೇಲೆ ಆಕರ್ಷಣೆಯನ್ನು ಪಡೆಯುತ್ತದೆ. ಆದರೆ ಇಲ್ಲಿ ಯಾವಾಗ ಸಂತುಲನೆ ನಷ್ಟವಾಯಿತೋ ಆವಾಗ ಕಲೆ ಅದೇ ವೇದಿಕೆಯ ಒಂದೊಂದೇ ಮೆಟ್ಟಿಲಿಂದ ಕೆಳಕ್ಕೆ ಕೆಳಕ್ಕೆ ಇಳಿದು ಬಿಡುತ್ತದೆ. ಇದರ ಸ್ಥಾನದಲ್ಲಿ ವೈಯಕ್ತಿ ಪ್ರತಿಷ್ಠೆಗಳು ಕಲೆಯ ನೆಲೆಯನ್ನು ಮೀರಿ ವೈಭವೀಕರಿಸಲ್ಪಡುತ್ತದೆ. ಇದು ಕಲಾವಿದನಿಗೆ ಎಷ್ಟು ಅನ್ವಯವೋ ಪ್ರೇಕ್ಷಕನಿಗೂ ಅಷ್ಟೇ ಅನ್ವಯ. ಒಂದು ಕಲೆ ಸುಸಂಸ್ಕೃತವಾಗಿ ಬೆಳೆಯಬೇಕೆಂದರೆ ಇವರಡೂ ಅಂಗಗಳೂ ಸುಸಂಸ್ಕೃತವಾಗಿರುವುದು ಅನಿವಾರ್ಯವಾಗುತ್ತದೆ. ಕಲೆಯ ಹಿರಿಮೆಯಿಂದ ಇವುಗಳು ಮೀರಿದೆ ಎಂದಾದರೆ ಅಲ್ಲಿ ಕಲೆಗೆ ಸ್ಥಾನವಿಲ್ಲ ಎಂದೇ ಅರ್ಥವಲ್ಲವೇ?

ಕಲೆಯನ್ನು ಸಹಜವಾಗಿ ಅನುಭವಿಸಬೇಕೆಂದರೆ ಅದಕ್ಕೆ ಅನುಕೂಲ ಪರಿಸ್ಥಿತಿಗಳಿರುತ್ತವೆ. ಅದಕ್ಕೆ ಅದರದ್ದೇ ಆದ ಸ್ಥಾನಗಳು ಆ ನೆಲೆಯಲ್ಲಿದ್ದರೇನೆ ಸಾಧ್ಯ. ರಂಗದ ಮೇಲಿನ ನಾಟಕದ ಕಲಾವಿದ ಪಾತ್ರವಾಗಿರುವಾಗ ಪಾತ್ರವಾಗಿ ಪ್ರೇಕ್ಷಕನೊಂದಿಗೆ ಬೆರೆತರೆ ಅಲ್ಲಿ ನಾಟಕ ನಾಟಕವಾಗಿ ಅನುಭವಿಸಲ್ಪಡುವುದಿಲ್ಲ. ನಾಟಕದ ಹಿನ್ನೆಯಲೆಯ ಗಾಯಕ ಸಭೆಯಲ್ಲಿ ಬಂದು ಹಾಡಿದರೆ ರಂಗದ ಮೇಲಿನ ಗಮನ ಜಾರಿ ಇವನ ಮೇಲೆ ಬೀಳುವುದು ಮಾತ್ರವಲ್ಲ ಅಸಹಜತೆ ನಿರ್ಮಣವಾಗುತ್ತದೆ. ಅದಕ್ಕಾಗಿ ಕಲೆ ಕಲೆಯಾಗಿ ರೂಪುಗೊಳ್ಳುವಾಗ ಅದರ ಒಂದೊಂದು ಅಂಗಗಳಿಗೂ ಒಂದೊಂದು ಸ್ಥಾನ ಸಹಜವಾಗಿ ನಿರ್ಣಯಿಸಲ್ಪಡುತ್ತದೆ. ಕಲೆಗೆ ಪೂರಕವಾಗಬೇಕಾದ ಅಂಗಗಳು ಕೆಲವೇ ಆದರೂ ಅವುಗಳು ಮಾರಕವಾಗುವಾಗ ಕಲೆಯ ಸದ್ಬಾವನೆಗೆ ಯಾವ ವೇದನೆ ಯಾಗುತ್ತದೆ ಎಂಬುದನ್ನು ಅರಿಯದಿರುವುದೇ ಇಂದಿನ ದುರಂತ. ಆದರೆ ಈ ದುರಂತ ಸಂಭವನಿಯವಾಗುವುದು ನಮ್ಮ ಯಕ್ಷಗಾನ ಕಲೆಯಲ್ಲಿ ಎಂದು ಹೇಳುವಾಗ ಮನಸ್ಸೂ ವೇದನೆಯನ್ನ ಅನುಭವಿಸುತ್ತದೆ.

ಇತ್ತೀಚೆ ಹಲವು ನಿಯತಕಾಲಿಕೆಗಳ ಪುಟಗಳಲ್ಲಿ ಬಂದ ವಾರ್ತೆಗಳು ಯಾವ ರೀತಿಯ ನೋವನ್ನು ಉಂಟು ಮಾಡಿದೆ ಎಂದರೆ, ಯಕ್ಷಗಾನ ಕಲೆ ಸುಂಸಂಸ್ಕೃತರ ಸುಸಂಸ್ಕೃತ ಕಲೆ ಎಂದು ಅಭಿಮಾನದಿಂದ ಹೇಳುವವರಿಗೆ ಕಪಾಳ ಮೋಕ್ಷಮಾಡಿದಂತಿದೆ. ಇದಕ್ಕೆ ಕಾರಣೀಭೂರಾದವರಿಗೆ ಇದರ ಗಂಭೀರತೆಯ ಅರಿವಾಗುವುದಿಲ್ಲ. ಆದರೆ ಒಂದು ಕಲೆಯನ್ನು ಅದೇ ರೂಪದಲ್ಲಿ ಅನುಭವಿಸುವವರಿಗೆ ಆ ಅನುಭವವನ್ನು ಹಂಚಿಕೊಂಡು ತನ್ಮಯರಾಗುವವರಿಗೆ ಯಕ್ಷಗಾನ ಅಭಿಮಾನ ಉತ್ತರವಿಲ್ಲದ ಪ್ರಶ್ನೆಗಳಾಗುತ್ತವೆ. ಯೋಚಿಸಿ ಹೊಸದಾಗಿ ಒಬ್ಬ ಪ್ರೇಕ್ಷಕ ಇಲ್ಲಿಗೆ ಬಂದಲ್ಲಿ ಈ ಯಕ್ಷಗಾನವನ್ನು ಅವನು ಯಾವ ರೀತಿ ಸ್ವೀಕರಿಸಬೇಕು.? ಘಟನೆಯ ಬಗ್ಗೆ ಸ್ಪಷ್ಟೀಕರಣವೋ ಲೇಖನವೋ ಕೊಡುವುದು ಸುಲಭ ಆದರೆ ಇಂತಹ ಹಲವು ಪ್ರಶ್ನೆಗಳಿಗೆ ಉತ್ತರಿಸುವಾಗ ಮೈತುಂಬ ಧರಿಸಿದ ಯಕ್ಷಗಾನದ ವೇಷವೀದ್ದರೂ ಇವರು ದಿಗಂಬರರಾಗುತ್ತಾರೆ ಎಂಬುದೇಕೆ ಹೊಳೆಯುವುದಿಲ್ಲ?

ಮನಸ್ಸಿಗೆ ಘಾಸಿಯಾಗುವ ವಿದ್ಯಮಾನಗಳನ್ನು ಓದಿ ಕೇಳಿ ತಿಳಿದಾಗ “ ಛೇ ....” ಎಂಬ ಒಂದೇ ಉದ್ಗಾರ ಮೊದಲಿಗೆ ಬಂದರೂ ಇಷ್ಟಕ್ಕೇ ಅದರ ಪರಿಣಾಮ ಸೀಮಿತಗೊಳ್ಳುವುದಿಲ್ಲ. ಯಕ್ಷಗಾನದ ಒಂದು ಪದ ಗುನು ಗುನಿಸಿ ಸಂತಸ ಪಡುವಾಗಲೂ ಈ ಘಟನಾವಳಿಯ ರಾಕ್ಷಸ ರೂಪದ ರೌದ್ರತೆ ದರ್ಶನವಾದ ಹಾಗೆ ಬೇಡ ಬೇಡವೆಂದರೂ ಆಗುತ್ತದೆ.ಕಲೆಯಿಂದ ಅತೀತವಾಗಿ ಮನಸ್ಸು ಚಿಂತಿಸುತ್ತಿರುವುದೇ ಇಂದಿನ ದುರಂತಗಳಿಗೆ ಮೂಲ ಕಾರಣ. ದ್ವೇಷದಿಂದಲೋ ವೈಮನಸ್ಸಿನಿಂದಲೋ ವ್ಯಕ್ತಿಗತವಾದ ಅಭಿಪ್ರಾಯ ವೆತ್ಯಾಸಗಳ ಪ್ರಭಾವಕ್ಕೆ ಗುಲಾಮರಾಗಿ ಪ್ರವೃತ್ತರಾಗುವಾಗ, ಒಂದು ಘಳಿಗೆಯೂ ಕಲೆಯ ಬಗ್ಗೆ ಯೋಚಿಸದ ಮನೋಭಾವಕ್ಕೆ ಏನೆನ್ನಬೇಕು? ವೈಯಕ್ತಿಕ ಭಾವನೆಗಳೇ ಕಲೆಯಿಂದ ಮುಖ್ಯ ಎನಿಸಲ್ಪಡುತ್ತದೆ. ಸೌಮ್ಯ ಪಾತ್ರದ ಪಾತ್ರಧಾರಿಗಳು ರಂಗದ ಮೇಲೆ ದ್ವೇಷದಿಂದ ಹೊಡೆದಾಟಕ್ಕಿಳಿದರೆ ಇದು ವಿಡಂಬನೆಯಲ್ಲದೆ ಮತ್ತೇನು?

ಕಲೆ ಕಲಾವಿದ ಇಲ್ಲಿ ಮಾತ್ರವಲ್ಲ ನಮ್ಮ ಸಹಜ ಜೀವನದಲ್ಲೂ ದ್ವೇಷ ವೈಷಮ್ಯ ಮಾತ್ಸರ್ಯಗಳು ನಮ್ಮ ಜೀವನದ ಅಮೂಲ್ಯಘಳಿಗೆಗಳನ್ನು ಕತ್ತಲಾಗಿಸುತ್ತವೆ ಎಂಬುದನ್ನು ಯೋಚಿಸಬೇಕು. ನೀರಿನ ತೇವಕ್ಕೆ ಭೀಜ ಮೊಳಕೆಯೊಡೆದಂತೆ ದ್ವೇಷ ಸುಲಭದಲ್ಲಿ ಹುಟ್ಟಿಕೊಳ್ಳುತ್ತವೆ. ಆದರೆ ಬೀಜ ಮರವಾಗುವಾ ಅದೇ ತೇವ ಅದಕ್ಕೆ ಸಾಕಾಗುವುದಿಲ್ಲ. ಹಾಗೆ ದ್ವೇಷ. ಅದರ ಹುಟ್ಟಿಗೆ ಸಣ್ಣ ವಿಷಯವೇ ಕಾರಣವಾದರೂ ಅ ದ್ವೇಷ ಸಾಧನೆಗೆ ಬಹಳಷ್ಟು ಕಷ್ಟಪಡಬೇಕಾಗುತ್ತದೆ. ದ್ವೇಷ, ಶತ್ರುತ್ವ ಇಲ್ಲದಿದ್ದರೆ ಸ್ವಯಂ ರಕ್ಷಣೆಯ ಅಗತ್ಯವೇ ಬೀಳುವುದಿಲ್ಲ. ನಿಜ ಜೀವನದಲ್ಲಿ ಇದರ ಅರ್ಥ ನಮಗೆ ಯಾಕೆ ಅಗುದಿಲ್ಲವೋ ಆಶ್ಚರ್ಯವಾಗುತ್ತದೆ.

ದ್ವೇಷ ವೈಷಮ್ಯ ಬಿಟ್ಟು ಸ್ನೇಹ ಸಧ್ಬಾವನೆಯಿಂದ ಜೀವನದ ಘಳಿಗೆಗಳನ್ನು ಮಧುರವಾಗಿಸಬೇಕೇಂದು ಹೇಳುವುದು ವೇದಾಂತವಾಗಿಬಿಡುತ್ತದೆ. ಈ ವೇದಾಂತವನ್ನೇ ರಂಗದ ಮೇಲೆ ಬಡಿಸುವ ನಮಗೇ ಯಾಕೆ ಇದರ ಗಂಭೀರತೆಯ ಅರಿವಾಗುವುದಿಲ್ಲ? ಸನ್ಮಾರ್ಗದ ಮಾರ್ಗ ಸೂಚಿ ಫಲಕಗಳಂತೆ ಕೇವಲ ಫಲಕಗಳಾಗಿ ಮಾರ್ಗದ ಬದಿ ಸ್ಥಿರವಾದರೆ ಸಾಕೇ? ನಾವೇಕೆ ಆ ಮಾರ್ಗದ ಯಾತ್ರಿಕರಾಗಬಾರದು?

ನಮ್ಮ ಮನೆಯ ಕುಟುಂಬದ ಸದಸ್ಯನೊಬ್ಬ ಹೊರಗೆ ಪೆಟ್ಟು ತಿಂದು ಅವಮಾನಗೊಂಡರೆ ಆ ಕುಟುಂಬದ ಅಂಗವಾಗಿರುವ ನಮಗೂ ಅವಮಾನವಾದಂತಲ್ಲವೇ? ಸಮಷ್ಟಿಯ ಈ ಭಾವನೆಯಾಕೆ ಸ್ಫುರಿಸುವುದಿಲ್ಲ. ಮನೆಯ ಮಕ್ಕಳೊ ಅಥವಾ ಇನ್ನಿರರು ಜಗಳವಾಡಿ ಬಡಿದಾಡಿಕೊಂಡರೆ ಮನೆಯ ಹಿರಿಯನಾದವನಿಗೆ ಹೇಗಾಗಬೇಡ? ಮನೆಯ ಹಿರಿಯ ಬಿಡಿ ಆ ಅಮನೆಗೆ ಪ್ರೀತಿ ಅಭಿಮಾನದಿಂದ ಬರುವ ಅತಿಥಿಯಾದರೂ ಅದನ್ನು ಹೇಗೆ ಸ್ವಿಕರಿಸಬೇಕು? ಇಂತಹ ಸರಳ ತತ್ವಗಳು ಇದಕ್ಕೆ ಉದ್ಯುಕ್ತರಾಗುವಾಗ ಹೊಳೆಯುವುದಿಲ್ಲ ಯಾಕೆ? ಸಮಸ್ಯೆಗಳನ್ನೆಲ್ಲ ಯಕ್ಷಗಾನ ರಂಗದಲ್ಲೆ ಇತ್ಯರ್ಥ ಮಾಡುವುದಕ್ಕೆ ಹೊರಟರೆ ಯಕ್ಷಗಾನಕ್ಕೆ ಪರ್ಯಾಯ ಪದ ಯಾವುದಾಗಬಹುದು? ಯೋಚಿಸಿದಾಗ ಬಹಳ ಖೇದವಾಗುತ್ತದೆ.

ಯಕ್ಷಗಾನ ಒಂದು ಸುಸಂಸ್ಕೃತರ ಸುಸಂಸ್ಕೃತ ಕಲೆ ಎಂದು ಹೇಳಿಕೊಳ್ಳುವುದು ಒಂದು ಅಸಹನೀಯ ಅನುಭವಾಗುತ್ತದೆ ಎಂದಾದರೆ, ತಮ್ಮ ಸಂಸ್ಕೃತಿ ದರ್ಶನಕ್ಕೆ ಬೇರೆ ಯಾವುದಾದರೂ ಕಲಾ ಮಾಧ್ಯಮವನ್ನು ನೋಡಿ ಕೊಳ್ಳಬಹುದು. ಕಲಾಭಿಮಾನಿಯಾಗಿ ಬೇರೊಂದು ಕಲೆ ಹಾಳಾಗಲೀ ಎಂಬ ಉದ್ದೇಶವಲ್ಲ. ಹೀಗೆ ಕಲ್ಪಿಸುವುದು ತಪ್ಪ್ಪು. ಆದರೂ ನೋವಿನ ಕಲ್ಪನೆ ಇದು. ಯಕ್ಷಗಾನ ಅಭಿಮಾನಿ ಅಂತ ಹೇಳಿಕೊಳ್ಳುವುದು ಒಂದು ಅಭಿಮಾನದ ಸಂಕೇತ. ಮುಂದೇ ಅದೇ ಒಂದು ಅವಮಾನ ಎಂದು ಎನಿಸಲ್ಪಡುತ್ತದೆ ಎಂದಾದರೆ ಅದಕ್ಕಿಂತ ಬೇರೆ ದುರಂತವಿಲ್ಲ. ಕಪಾಲ ಇದ್ದರೆ ತಾನೇ ಕಪಾಳ ಮೋಕ್ಷದ ಅರಿವಾಗುವುದು? ಹಾಗಾಗಿ ಅಭಿಮಾನ ಇರುವುದರಿಂದ ಯಕ್ಷಗಾನ ಅಭಿಮಾನಕ್ಕೆ ದಂತಭಗ್ನವಾದಂತಾಗಿದೆ.

ಮನುಷ್ಯನಾದವನು ಕ್ರೋಧ ಮದ ಮೋಹ ಮುಂತಾದ ಷಡ್ವೈರವನ್ನು ತನ್ನ ನಿಯಂತ್ರಣದಲ್ಲಿ ಇರಿಸಿಕೊಂಡರೆ ಅದರಿಂದ ಸಮಾಜದ ಹಿತ ಕಾಪಾಡಿದ ಹಾಗೂ ಆಗುತ್ತದೆ. ಮನುಷ್ಯ ದೌರ್ಬಲ್ಯಗಳನ್ನು ಹೊಂದಿರುವುದು ಸಹಜವೇ ಆದರೆ, ಅದರಿಂದ ಅನ್ಯರಿಗೆ ಘಾಸಿಯಾಗಬಾರದು ಎಂಬ ಸ್ವಯಂ ನಿರ್ಧಾರ ತೆಗೆದುಕೊಳ್ಳಬೇಕು. ಇದು ಸಧ್ಭಾವನೆ ಎನಿಸಲ್ಪಡುತ್ತದೆ. ಎಂತಿದ್ದರೂ, ತಮ್ಮ ದೌರ್ಬಲ್ಯ ರಂಗಸ್ಥಳದ ಚೌಕಟ್ಟಿನ ಹೊರಗಿರುವಂತೆ ನೋಡಬೇಕಾದದ್ದು ಕಲೆಗೆ ಸಂಬಂಧಿಸಿದ ಪ್ರತಿಯೊಬ್ಬರ ಕರ್ತವ್ಯ. ಇಲ್ಲವಾದರೆ ಅದರ ಅಸ್ತಿತ್ವವನ್ನೇ ಪ್ರಶ್ನಿಸಿದ ಹಾಗಾಗುತ್ತದೆ. ಕಲಾವಿದನಾಗಲೀ ಪ್ರೇಕ್ಷಕನಾಗಲಿ ಶಿಷ್ಟಾಚಾರ ಹೊಂದಿರುವುದು ಪರೋಕ್ಷವಾಗಿ ಕಲಾಸೇವೆ ಮಾಡಿದಂತೆ . ಇಲ್ಲವಾದರೆ “ಅಭಿಮಾನಂ ದಂತ ಭಗ್ನಂ “ ಎಂದು ವಿಷಾದಿಸಬೇಕಾಗುತ್ತದೆ.



ಕೃಪೆ : http://yakshachintana.blogspot.in/


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ